ನ್ಯಾಯ ತೀರ್ಪಿನಲ್ಲಿ ನಿರ್ಭಯ

ನ್ಯಾಯ ತೀರ್ಪಿನಲ್ಲಿ ನಿರ್ಭಯ

ಸಾರಾಂಶ

ನ್ಯಾಯತೀರ್ಪಿನ ದಿನದ ಬಗ್ಗೆ ಯೋಚಿಸುವುದು ಅನೇಕ ಜನರ ಹೃದಯದಲ್ಲಿ ಭಯವನ್ನು ಉಂಟುಮಾಡುತ್ತದೆ. ಪ್ರಾಯಶ್ಚಿತ್ತದ ಆ ಅಂತಿಮ ದಿನದಂದು ನಾವು ಸುರಕ್ಷಿತವಾಗಿ ಜಯಶಾಲಿಗಳಾಗುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವದು ಹೇಗೆ? ಭೂಲೋಕದ ವಕೀಲನು ನಮ್ಮ ಮೊಕದ್ದಮೆಗೆ ವಾದಿಸುವ ರೀತಿಯಲ್ಲಿಯೇ, ನ್ಯಾಯ ತೀರ್ಪಿನಲ್ಲಿ ನಮ್ಮ ಪರವಾಗಿ ವಾದಿಸಲು ದೇವರು ನಮಗೆ ಒಬ್ಬ ವಕೀಲನನ್ನು ನೀಡುವುದಾಗಿ ಹೇಳಿದ್ದಾನೆ. ಈ ಕರಪತ್ರಿಕೆಯು ಆ ವಕೀಲನನ್ನು ನಮಗೆ ಪರಿಚಯಿಸಿ, ಮುಂಬರುವ ತೀರ್ಪಿನ ಬಗ್ಗೆ ಚಿಂತಿಸುವ ನಮಗೆ ಹೇಗೆ ಭರವಸೆ ಹೊಂದಬೇಕೆಂದು ಕಲಿಸುತ್ತದೆ.

ಡೌನ್ ಲೋಡ್

ಒಂದು ಬೆಳಿಗ್ಗೆ, ನಾನು ಒಂದು ಪ್ರಮುಖ ಸಭೆಗೆ ಹಾಜರಾಗಲು ನನ್ನ ಹೋಟೆಲ್ ಕೋಣೆಯಿಂದ ಹೊರಟೆ. ನಾನು ಸಭೆಗೆ ತಡವಾಗಿ ಹೊರಟಿದ್ದ ಕಾರಣ, ವೇಗದ ಮಿತಿಮೀರಿ ಗಾಡಿಯನ್ನು ವೇಗವಾಗಿ ಓಡಿಸುತ್ತಿದ್ದೆ. ನಾನಿನ್ನೂ ಸಭೆಯ ಸ್ಥಳ ಸೇರಲು ಅರ್ಧ ದಾರಿಯಲ್ಲಿದ್ದಾಗ, ಒಬ್ಬ ಪೊಲೀಸ್ ಅಧಿಕಾರಿ ನನ್ನನ್ನು ಅಡ್ಡಗಟ್ಟಿ, ನಿಲ್ಲಿಸಿ, ಪೊಲೀಸ್ ಠಾಣೆಗೆ ಹೋಗಬೇಕೆಂದು ಹೇಳಿದರು! ನಾನು ಅಪರಾಧ ಎಸಗಿದ್ದು ನನಗೆ ತಿಳಿದಿದ್ದರಿಂದ ನನಗೆ ತುಂಬಾ ಹೆದರಿಕೆ ಆಗಿತ್ತು ನಾನೀಗ ಅಸಹಾಯಕನಾಗಿದ್ದೆ. 

ಪೊಲೀಸ್ ಅಧಿಕಾರಿ ನನ್ನ ವಿರುದ್ಧ ಕೇಸ್ ಫೈಲ್ ಮಾಡಿದ ನಂತರ, ನನ್ನನ್ನು ಹತ್ತಿರದ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ, ವಕೀಲನಾಗಿ ಕೆಲಸ ಮಾಡುವ ನನ್ನ ಸ್ನೇಹಿತನನ್ನು ನಾನು ಭೇಟಿಯಾದೆ. ನನ್ನನ್ನು ಕೋರ್ಟಿನಲ್ಲಿ ಸಂಧಿಸಿದ್ದರಿಂದ ಅವನಿಗೆ ಆಶ್ಚರ್ಯವಾಯಿತು. ನಾನು ನನ್ನ ಪರಿಸ್ಥಿತಿಯನ್ನು ವಿವರಿಸಿದಾಗ, ಅವನು - “ಚಿಂತಿಸಬೇಡ. ನಾನು ನಿನ್ನ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತೇನೆ ಎಂದನು. ನನಗೆ ತುಂಬಾ ಸಂತೋಷವಾಯಿತು. ನನ್ನ ಸ್ನೇಹಿತನೇ ನನ್ನ ವಕೀಲ!

ನನ್ನ ಸ್ನೇಹಿತ ನನ್ನ ಪರವಾಗಿ ವಾದಿಸಲು ಮುಂದಾದ ಕಾರಣ, ನ್ಯಾಯಾಧೀಶರು ಕನಿಷ್ಠ ದಂಡವನ್ನು ವಿಧಿಸಿದರು. ನಾನು ದೇವರನ್ನು ಸ್ತುತಿಸುತ್ತಾ ಕೋರ್ಟ್ ನಿಂದ ಹೊರಟೆ.

ಒಬ್ಬ ಭೂಲೋಕದ ನ್ಯಾಯಾಧೀಶನ ಮುಂದೆ ನಿಲ್ಲುವುದು ನಿಜವಾಗಿಯೂ ಭಯಾನಕ ಅನುಭವವೇ ಸರಿ. ಆದರೆ ಪರಲೋಕದ ನ್ಯಾವಿಚಾರಣೆಯ ಮಹಾದಿನದಂದು, ನ್ಯಾಯತೀರ್ಪು ಕೊಡಲಿರುವ ದೇವರ ಮುಂದೆ ನಿಲ್ಲುವುದು ಹೇಗಿರುತ್ತದೆ ಎಂಬುದಕ್ಕೆ ಹೋಲಿಸಿದರೆ ಭೂಲೋಕದ ನ್ಯಾಯ ವಿಚಾರಣೆ ಏನೇನೂ ಅಲ್ಲ. ಆ ದಿನ ನಾಳೆಯೇ ಬರುವದಾಗಿದ್ದರೆ, ನೀವು ಸಿದ್ದಾರಾಗಿದ್ದೀರಾ?

ನ್ಯಾಯವಿಚಾರಣೆಗಾಗಿ ಸಿದ್ಧರಾಗುವುದು

ಕೆಲವು ಜನರು ಮುಂಬರುವ ತೀರ್ಪಿಗೆ ನೀರಾಸಕ್ತಿಯ ಮನೋಭಾವದಿಂದ ಪ್ರತಿಕ್ರಿಯಿಸುತ್ತಾರೆ. ಅವರು ಮದ್ಯ ಪಾನ ಮತ್ತು ಧೂಮಪಾನ ಮಾಡುತ್ತಾರೆ, ಜೂಜಾಡುತ್ತಾರೆ, ನೈಟ್ ಕ್ಲಬ್ ಗಳಿಗೆ ಹೋಗುತ್ತಾರೆ ಮತ್ತು ಅಶ್ಲೀಲ ವೀಡಿಯೋ ಗಳನ್ನು ನೋಡುತ್ತಾರೆ. ಈ ವಿಷಯಗಳನ್ನು ಪರಲೋಕದ ದಾಖಲೆಯ ಪುಸ್ತಕದಲ್ಲಿ ಬರೆಯಲಾಗುತ್ತಿದೆ ಎಂದು ಅವರಿಗೆ ತಿಳಿದಿರಬಹುದು, ಆದರೆ ಅವರು ಸೈತಾನ (ಶೈತಾನ್ ಎಂದೂ ಸಹ ಕರೆಯಲ್ಪಡುತ್ತಾನೆ) ಒಡ್ಡುವ ಭ್ರಮೆಗಳೆಂಬ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ತಲೆಕೆಡಿಸಿಕೊಳ್ಳುವುದಿಲ್ಲ.

ಮತ್ತೊಂದು ಗುಂಪಿನ ಜನರು ಅತಿಯಾದ ಭಯದಿಂದ ಪ್ರತಿಕ್ರಿಯಿಸುತ್ತಾರೆ. ಅವರು ಒಂದೇ ಒಂದು ಪ್ರಾರ್ಥನೆಯ ಕೂಟವನ್ನೂ ಸಹ ತಪ್ಪಿಸಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಅವರು ಸಮಾಧಿಯಲ್ಲಿ ನರಳುತ್ತೇವೆ ಅಥವ ನರಕದ ಬೆಂಕಿಯಲ್ಲಿ ಸುಡಲ್ಪಡುತ್ತೇವೆ ಎಂದು ಅದೆಷ್ಟು ಯೋಚಿಸುತ್ತಾರೆಂದರೆ, ಅವರು ದೇವರ ಪ್ರೀತಿ ಮತ್ತು ದಯೆಯನ್ನೇ ಮರೆತುಬಿಡುತ್ತಾರೆ. 

ಆದರೆ ಯಾವ ರೀತಿಯಲ್ಲಿ ನನಗೆ ನ್ಯಾಯಾಲಯದಲ್ಲಿ ಒಬ್ಬ ವಕೀಲ ಇದ್ದನೋ, ಅದೇ ರೀತಿಯಲ್ಲಿ ದೇವರ ನ್ಯಾಯಾಲಯದಲ್ಲಿ ದೇವರು ನಮಗೆಲ್ಲರಿಗೆ ಒಬ್ಬ ವಕೀಲನನ್ನು ಒದಗಿಸಿದ್ದಾನೆ. ಆತನು ಈ ನ್ಯಾಯವಿಚಾರಣೆ ಕ್ಷೇಮವಾಗಿ ಹಾದುಹೋಗಲು ಸಹಾಯ ಮಾಡುವನು. ನೀವು ಒಂಟಿಯಾಗಿರಬೇಕಾಗಿಲ್ಲ!

ನಮ್ಮ ವಕೀಲನು ಯಾರು?

ವಕೀಲರ ಕುರಿತ ಕಲ್ಪನೆ ನಮಗೆ ಹೊಸದೇನಲ್ಲ. ಪ್ರತಿವರ್ಷ, ಸಾವಿರಾರು ಯಾತ್ರಾರ್ಥಿಗಳು ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಅನೇಕ ಜನರು ಮಹಾನ್ ನಾಯಕರ ಸಮಾಧಿಗಳಲ್ಲಿ ಹೋಗಿ ಪ್ರಾರ್ಥಿಸುತ್ತಾರೆ, ಯಾಕೆಂದರೆ ಅವರು ತಮ್ಮ ಪರವಾಗಿ ವಾದಿಸುತ್ತಾರೆಂದು ಅವರು ನಂಬುತ್ತಾರೆ. 

ಆ ಮಹಾನ್ ನಾಯಕರನ್ನು ಗೌರವಿಸುವುದು ಒಳ್ಳೆಯದೇ, ಆದರೆ ಅವರಿಗೆ ಪ್ರಾರ್ಥಿಸುವುದು ಅಥವಾ ಅವರ ಮಧ್ಯಸ್ಥಿಕೆಯನ್ನು ಕೇಳುವುದು ಸಂಪೂರ್ಣ ನಿಷಿದ್ದ (ಹರಾಮ್) ವಾಗಿದೆ. ಯಾಕೆಂದರೆ ಅವರು ಸತ್ತಿದ್ದಾರೆ ಮತ್ತು ಅವರು ನಿನಗೇನು ಮಾಡಲಾರರು. ಪ್ರವಾದಿಗಳೂ ಸಹ ಪುನರುತ್ಥಾನದ ದಿನಕ್ಕಾಗಿ ಕಾಯುತ್ತಾ ತಮ್ಮ ಸಮಾಧಿಗಳಲ್ಲಿ ನಿದ್ರಿಸುತ್ತಿದ್ದಾರೆ.

ನಮಗಾಗಿ ಮಧ್ಯಸ್ಥಿಕೆ ವಹಿಸುವಂತೆ ಸತ್ತವರನ್ನು ಕೇಳುವುದು ನಿಷಿದ್ಹ (ಹರಾಮ್) ಆಗಿದ್ದರೂ, ಒಬ್ಬರು ಮಧ್ಯಸ್ಥಿಕೆ ವಹಿಸಬೇಕೆಂಬ ಕಲ್ಪನೆ ಸರಿಯಾಗಿಯೇ ಇದೆ. ಆದರೆ ಯಾರ ಮಧ್ಯಸ್ಥಿಕೆ ದೇವರಿಗೆ ಸ್ವೀಕಾರಾರ್ಹವಾಗಿದೆ? ಮಧ್ಯಸ್ಥಿಕೆ ವಹಿಸುವವನು 

1. ಜೀವಂತನಾಗಿರಬೇಕು (ಏಕೆಂದರೆ ಸತ್ತವರು ನಮ್ಮ ಪರವಾಗಿ ಮಾತನಾಡಲು ಸಾಧ್ಯವಿಲ್ಲ). 

2. ಪಾಪರಹಿತನಾಗಿರಬೇಕು (ಏಕೆಂದರೆ ಕಾನೂನಿನಿಂದ ದೋಷಾರೋಪಣೆ ಮಾಡಲ್ಪಟ್ಟವನು ಇತರರ ಪರವಾಗಿ ವಾದಿಸಲು ಸಾಧ್ಯವಿಲ್ಲ).

ಇಂತಹ ಅರ್ಹತೆಗಳನ್ನು ಯಾರು ಪೂರೈಸಬಲ್ಲರು? ಪರಲೋಕದಲ್ಲಿ ಜೀವಂತವಾಗಿರುವ ಮತ್ತು ಸಂಪೂರ್ಣವಾಗಿ ಪರಿಶುದ್ಧನಾದ ಇಸಾ ಅಲ್-ಮಸೀಹ್ ಎಂದೂ ಕರೆಯಲ್ಪಡುವ ಪ್ರೀತಿಯ ಯೇಸು ಕ್ರಿಸ್ತನಲ್ಲದೆ ಬೇರಾರಿಗೂ ಆ ಅರ್ಹತೆಗಳಿಲ್ಲ. 

ಇದರ ಬಗ್ಗೆ ಆಲೋಚಿಸಿ ತಾನು ಪಾಪರಹಿತನು ಎಂದು ಹೇಳಿಕೊಳ್ಳಬಲ್ಲವರು ಯಾರಾದರೂ ಇದ್ದಾರೆಯೇ? ಆದಾಮ, ನಿಷೇಧಿತ ಹಣ್ಣನ್ನು ತಿಂದನು; ನೋವಾ (ನುಹ್) ಮದ್ಯವನ್ನು ಕುಡಿದನು; ಅಬ್ರಹಾಮನು (ಇಬ್ರಾಹಿಂ) ಸುಳ್ಳು ಹೇಳಿದನು; ಮೋಶೆ (ಮೂಸಾ) ಒಬ್ಬ ಮನುಷ್ಯನನ್ನು ಕೊಂದನು; ದಾವೀದ (ದಾವೂದ್) ಇನ್ನೊಬ್ಬ ವ್ಯಕ್ತಿಯ ಹೆಂಡತಿಯನ್ನು ಮೋಹಿಸಿ ಮೋಸದಿಂದ ಕದ್ದುಕೊಂಡನು. ಒಂದೇ ಒಂದು ತಪ್ಪನ್ನೂ ಮಾಡದ ಅಥವಾ ಎಂದಿಗೂ ಕ್ಷಮೆಯನ್ನು ಕೇಳದ ಒಬ್ಬನೇ ಒಬ್ಬ ಪ್ರವಾದಿಯನ್ನು ನೀವು ಕಾಣಲಾರಿರಿ.

ಆದರೆ ಯೇಸು ಕ್ರಿಸ್ತನು ಯಾವುದೇ ಪಾಪವನ್ನು ಮಾಡಲಿಲ್ಲ. ಯೇಸು ಸ್ವತಃ ಹೀಗೆ ಹೇಳಿದ್ದಾ ನೆ - “ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ, ನಾನು ಆತನಿಗೆ ಮೆಚ್ಚಿಗೆಯಾದದ್ದನ್ನು ಯಾವಾಗಲೂ ಮಾಡುವದರಿಂದ ಆತನು ನನ್ನನು ಒಂಟಿಗನಾಗಿ ಬಿಡಲಿಲ್ಲ” (ಇಂಜಿಲ್ ಎಂದೂ ಕರೆಯಲ್ಪಡುವ ಸುವಾರ್ತೆಗಳಿಂದ, ಯೋಹಾನ 8:29). 

ಶಾಂತಯುತವಾಗಿ ವಿಚಾರಣೆಯನ್ನು ಎದುರಿಸುವುದು

ಯೇಸು ಕ್ರಿಸ್ತನು ಪರಲೋಕದಲ್ಲಿ ಜೀವಂತವಾಗಿದ್ದಾನೆ ಮತ್ತು ಸಂಪೂರ್ಣವಾಗಿ ಪಾಪರಹಿತನಾಗಿದ್ದಾನೆ. ಆತನು ನನ್ನ ಮತ್ತು ನಿಮ್ಮ ಪರವಾಗಿ ವಾದಿಸಲು ಸಿದ್ಧನಿದ್ದಾನೆ. ಮತ್ತು ಆತನು ಶೀಘ್ರದಲ್ಲೇ ಬರಲಿದ್ದಾನೆ.

ಆತನು ಎರಡನೇ ಸಾರಿ ಬರುತ್ತಾನೆ ಎಂದರೆ, ಯೇಸು ಕ್ರಿಸ್ತನು ಕೊನೆಯ ಪ್ರವಾದಿಯಾಗಿದ್ದಾನೆ ಎಂದರ್ಥ. ಹೌದು, ಆತನು ಪ್ರವಾದಿಗಿಂತಲೂ ಹೆಚ್ಚಿನವನುಆತನು ನಮ್ಮ ವಕೀಲನು; ನಮ್ಮ ಗುರು ಮತ್ತು ನ್ಯಾಯತೀರ್ಪಿನ ದಿನದಲ್ಲಿ ನಮ್ಮ ಶಾಂತಿಯೂ ಸಹ ಆತನೇ. ಅತನು ನಮಗೆ ಹೇಳಿದ್ದೆನೆಂದರೆ - “ಯಾವನಾದರೂ ನನ್ನ ವಾಕ್ಯವನ್ನು ಕೈಕೊಂಡು ನಡೆದರೆ ಅವನು ಎಂದಿಗೂ ಸಾವನ್ನು ಕಾಣುವದಿಲ್ಲ” (ಸುವಾರ್ತೆಗಳು, ಯೋಹಾನ 8:51). 

ಯೇಸು ಸತ್ತಿಲ್ಲ; ಆತನು ಬದುಕಿದ್ದಾನೆ! ಮತ್ತು ಆತನು ಇಂದಿಗೂ ಭೂಮಿಯ ಮೇಲೆ ತನ್ನ ಜನರ ಸಮುದಾಯವನ್ನು ಕಟ್ಟುತ್ತಿದ್ದಾನೆ. ಕೆಲವೊಮ್ಮೆ ಆತನು ಕನಸಿನಲ್ಲಿ ಬಿಳಿ ವಸ್ತ್ರಧಾರಿಯಂತೆ ಕಾಣಿಸಿಕೊಳ್ಳುವ ಮೂಲಕ ಅಥವಾ ನಾವು ಆತನ ಹೆಸರಿನಲ್ಲಿ ದೇವರನ್ನು ಪ್ರಾರ್ಥಿಸುವಾಗ ನಮಗೆ ಪವಾಡಗಳನ್ನು ನೀಡುವುದರ ಮೂಲಕ ತನ್ನ ಸಮುದಾಯಕ್ಕೆ ಜನರನ್ನು ಆಹ್ವಾನಿಸುತ್ತಾನೆ. 

ನ್ಯಾಯವಿಚಾರಣೆಯ ದಿನದಲ್ಲಿ ನೀವು ಶಾಂತಿಯನ್ನು ಹೊಂದಲು ಬಯಸುವಿರಾ? ಯೇಸು ಕ್ರಿಸ್ತನ ಮೇಲೆ ನಿಮಗಿರುವ ನಂಬಿಕೆಯನ್ನು ಒಪ್ಪಿಕೊಳ್ಳಿ. ನಾವು ಸತ್ತವರ ಮೇಲೆ ಮತ್ತು ನ್ಯಾಯವಿಚಾರಣೆಯ ದಿನದಂದು ತಾವು ಹೇಗೆ ರಕ್ಷಿಸಲ್ಪಡುತ್ತೇವೆ ಎಂಬುದನ್ನು ತಿಳಿಯದವರ ಮೇಲೆ ನಮ್ಮ ಭರವಸೆಯನ್ನು ಏಕೆ ಇಡಬೇಕು? ಪರಲೋಕದಲ್ಲಿ ತನಗೆ ಸ್ಥಾನವಿದೆ ಎಂಬ ವಿಷಯದಲ್ಲಿ ಯೇಸುವಿಗೆ ಖಾತ್ರಿಯಿದೆ. ನ್ಯಾಯಾಲಯದಲ್ಲಿ ನನ್ನ ವಕೀಲ ಸ್ನೇಹಿತನು ನನಗೆ ಸಹಾಯ ಮಾಡಿದಂತೆಯೇ, ಆತನು ನಮಗೆ ಸಹಾಯ ಮಾಡುವನು.

ಅಂತಹ ಅದ್ಭುತ ವಿಷಯವು ನಿಜವಾಗಬಹುದೇ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಯೇಸು ಕ್ರಿಸ್ತನು - “ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ, ಅದನ್ನು ನೆರವೇರಿಸುವೆನು” (ಸುವಾರ್ತೆಗಳು, ಯೋಹಾನ 14:14) ಎಂಬ ಭರವಸೆಯನ್ನು ಕೊಟ್ಟಿದ್ದಾನೆ. ನಾನು ನಿಮಗೆ ಹೇಳುತ್ತಿರುವುದು ನಿಜವೇ ಎಂದು ಕಂಡುಹಿಡಿಯಲು ಒಂದು ಪರೀಕ್ಷೆಯನ್ನು ಮಾಡಿ. ಯೇಸು ಈಗ ನಮ್ಮ ಜೀವನದ ತುರ್ತು ಪರಿಸ್ಥಿತಿಗಳನ್ನು ಎದುರಿಸುವಷ್ಟು ಶಕ್ತಿಶಾಲಿಯಾಗಿದ್ದಲ್ಲಿ, ಆಗ ಖಂಡಿತವಾಗಿಯೂ ಆತ ನಮ್ಮ ವಕೀಲನೆಂದು ನೀವು ಆತನಲ್ಲಿ ಭರವಸೆಯಿಡಬಹುದು. ಪ್ರಾಮಾಣಿಕ ಹೃದಯದಿಂದ ಯೇಸುವಿನ ಹೆಸರಿನಲ್ಲಿ ದೇವರನ್ನು ಪ್ರಾರ್ಥಿಸಿರಿ ಮತ್ತು ಏನಾಗುತ್ತದೆ ಎಂಬುದನ್ನು ನೋಡಿರಿ. ನೀವು ಪ್ರಾರ್ಥಿಸಬಹುದು:

ಓ ಕರ್ತನೇ, ನಿಜವಾಗಿಯೂ ನ್ಯಾಯತೀರ್ಪಿನ ದಿನದಂದು ಯೇಸು ನಮ್ಮ ವಕೀಲನನ್ನಾಗಿ ನೀವು ನೇಮಿಸಿದ್ದೀರಾ ಎಂದು ನಾನು ತಿಳಿಯಲು ಬಯಸುತ್ತೇನೆ. ಇದು ನಿಜವಾಗಿದ್ದರೆ, ದಯವಿಟ್ಟು ನನ್ನ ಪ್ರಾರ್ಥನೆಗೆ ಉತ್ತರಿಸಿ (ನಿಮ್ಮ ಅಗತ್ಯವನ್ನು ಇಲ್ಲಿ ಸೇರಿಸಿ). ನಾನು ಈ ಪ್ರಾರ್ಥನೆಯನ್ನು ಯೇಸು ಕ್ರಿಸ್ತನ ಹೆಸರಿನಲ್ಲಿ ಬೇಡಿಕೊಳ್ಳುತ್ತೇನೆ. ಆಮೆನ್.

ಯೇಸು ಕ್ರಿಸ್ತನನ್ನು ಹೇಗೆ ಅನುಸರಿಸಬೇಕೆಂಬುದರ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ.

Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು. ಕಾಪಿ ರೈಟ್ ನೋಟಿಸ್: ಕನ್ನಡ ಜೆ. ವಿ. ಬೈಬಲ್  ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, ೨೦೧೬

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover